ಪುನೀತ್ ಅಭಿನಯದ ಜಾಕಿ ಬಂತು, ಸಕ್ಸಸ್ಸೂ ಆಯ್ತು. ದುಡ್ಡೂ ಬಂತು, ನಿರ್ಮಾಪಕರ ಜೇಬೂ ತುಂಬ್ತು. ಈಗ ಅದೇ ಜಾಕಿ ಹೆಸರಿನ ಹಿಂದೆ ಹೊರಟಿದ್ದಾರೆ ನಿರ್ದೇಶಕ ರವಿ ಕಡೂರು.
ರವಿ ನಿರ್ದೇಶನದ ಹೊಸ ಚಿತ್ರದ ಹೆಸರು-ಜಂಗಲ್ ಜಾಕಿ. ಇದು ಪಕ್ಕಾ ಕಮರ್ಷಿಯಲ್ ಚಿತ್ರ. ಸುವರ್ಣ ವಾಹಿನಿಯ "ಹಳ್ಳಿ ಹೈದ ಪ್ಯಾಟೇಗ್ ಬಂದ" ರಿಯಾಲಿಟಿ ಶೋದಲ್ಲಿ ಗೆಲುವು ಸಾಧಿಸಿ, ಮನೆಮಾತಾಗಿರುವ ರಾಜೇಶ್ ಈ ಚಿತ್ರದ ನಾಯಕ. ರಾಜೇಶ್ ಪುನೀತ್ ಪಕ್ಕಾ ಅಭಿಮಾನಿಯಾಗಿರುವುದರಿಂದ ಜಂಗಲ್ ಜಾಕಿ ಎಂಬ ಹೆಸರು ಒಂಥರಾ ಮ್ಯಾಚ್ ಆಗುತ್ತೆ ಎನ್ನಬಹುದು.
ರಾಜೇಶ, ಐಶೂ ಜೋಡಿ: ಅದೇ ರಾಜೇಶನ ಜೋಡಿಯಾಗಿ ಒಂದಷ್ಟು ಕಿತ್ತಾಡಿ, ಜನರಿಗೆ ಇಷ್ಟವಾಗಿರು ಐಶು ನಾಯಕಿ. ಇವರಿಬ್ಬರನ್ನೂ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿರುವ ರವಿ, ತಾಜ್‌ಮಹಲ್ ಚಂದ್ರು ಜೊತೆ ಮೈಲಾರಿ ಮತ್ತು ಪ್ರೇಮ್ ಕಹಾನಿ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರು.
ಕಾಡಿನಿಂದ ಪ್ಯಾಟೆಗೆ ಬಂದ ಹುಡುಗನಿಗೆ ಐಸು ಸಿಗುತ್ತಾಳೆ. ಅಲ್ಲಿಂದ ಕತೆ ಓಪನ್ ಆಗುತ್ತದೆ. ಎರಡು ತಾಸು ಎಂಜಾಯ್ ಮಾಡಬೇಕೆಂದು ಬರುವ ಪ್ರೇಕ್ಷಕರಿಗೆ ಇಡೀ ಸಿನಿಮಾ ಮಜಾ ಕೊಡುತ್ತದೆ ಎನ್ನುತ್ತಾರೆ ರವಿ.
ವಿ. ಮನೋಹರ್ ಸಂಗೀತವಿದ್ದು, ನಾಲ್ಕು ಹಾಡುಗಳಿವೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಜೋಗಿಯಿಂದ ಮನೆಮಾತಾಗಿರುವ ಎಂ.ಆರ್.ಸೀನು ಛಾಯಾಗ್ರಹಣವಿದೆ. ಸೋಮವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಮಹೂರ್ತ ನಡೆದಿದ್ದು, ನಂತರ ಚಿತ್ರೀಕರಣ ಮುಂದುವರಿಯಲಿದೆ.
ಹುಡುಗಾಟ ಚಿತ್ರದಿಂದ ಹೆಸರು ಮಾಡಿರುವ ಪ್ರಕಾಶ್ ಸಂಕಲವಿದ್ದು, ಪತ್ರಕರ್ತ ವಿನಾಯಕರಾಮ್ ಕಲಗಾರು ಸಂಭಾಷಣೆ ಬರೆದಿದ್ದಾರೆ. ಹಿಂದೆ ಮಳೆಯಲಿ ಜೊತೆಯಲಿ ಚಿತ್ರಕ್ಕೆ ಕೂಡಾ ಕಲಗಾರು ಸಂಭಾಷಣೆ ಬರೆದಿದ್ದರು.
ನಿರ್ಮಾಣದ ಜವಾಬ್ದಾರಿಯನ್ನು ಭಾರ್ಗವ ತೇಜ್ ವಹಿಸಿದ್ದಾರೆ. ಅಂದಹಾಗೇ ಚಿತ್ರಕ್ಕೆ ಐಶು ಲವ್ಸ್ ರಾಜು ಎಂದು ಹೆಸರಿಡಬೇಕಿತ್ತು. ಐಸು ಹೆಸರನ್ನು ನಿರ್ಮಾಪಕ ರಾಮು ಅವರು ಇದಾಗಲೇ ರಿಜಿಸ್ಟರ್ ಮಾಡಿದ್ದರಿಂದ ಅದು ಜಂಗಲ್ ಜಾಕಿಯಾಗಿ ಬದಲಾಗಿದೆ.