Keblinger

Keblinger
| Tuesday, March 8, 2011
ಗನ್ ಎತ್ತಂಗಡಿ, ಹರೀಶ್ ಆತ್ಮಹತ್ಯೆ ಬೆದರಿಕೆ

ಗನ್ ಚಿತ್ರವನ್ನು ನಿರ್ದೇಶಿಸಿರುವ ನಟ ಹರೀಶ್ ರಾಜ್ ಅವರು ಸಂತೋಷ್ ಚಿತ್ರಮಂದಿರದ ಮೇಲೆ ಹತ್ತಿ ಕೈಯಲ್ಲಿ ಚಾಕು ಹಿಡಿದು, ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಘಟನೆ ಇಂದು ಬೆಳಿಗ್ಗೆ ಘಟನೆ ನಡೆದಿದೆ.


ಗನ್ ಚಿತ್ರವನ್ನು ಎರಡೇ ವಾರದಲ್ಲಿ ಎತ್ತಂಗಡಿ ಮಾಡಿ ಸಂತೋಷ್ ಚಿತ್ರಮಂದಿರದಲ್ಲಿ ಸುದೀಪ್ ನಟನೆ ಮತ್ತು ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ ಕೆಂಪೇಗೌಡವನ್ನು ಬಿಡುಗಡೆ ಮಾಡಲು ನಿರ್ಧಾರ ನಡೆಸಿದ್ದೇ ಹರೀಶ್ ರಾಜ್ ಅವರ ಆತ್ಮಹತ್ಯೆ ಯತ್ನಕ್ಕೆ ಕಾರಣ. ಗನ್ ಚಿತ್ರ ಹರೀಶ್ ರಾಜ್ ಅವರ ಎರಡನೇ ಚಿತ್ರ. ಮೊದಲ ಚಿತ್ರ ಕಲಾಕಾರ್ ನಿರ್ದೇಶಿಸಿ, ನಾಯಕ ನಟನಾಗಿ ನಟಿಸಿದ್ದರು.



ಸಂತೋಷ್ ಥಿಯೇಟರ್ ಮಾಲಿಕ ಅರುಣ್ ಕುಮಾರ್ ಅವರು ಫೋನ್ ಮಾಡಿ ಬರುವ ವಾರ ಮಾ.11ರಂದು ಥಿಯೇಟರನ್ನು ಕೆಂಪೇಗೌಡ ಚಿತ್ರಕ್ಕೆ ಬಿಟ್ಟುಕೊಡಬೇಕೆಂದು ಆಜ್ಞೆ ನೀಡಿದ್ದಾಗಿ ಹರೀಶ್ ಆರೋಪಿಸಿದ್ದಾರೆ. ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರೂ, 'ನಿಮ್ಮ ಚಿತ್ರ ಎರಡು ವಾರ ಮಾತ್ರ ಓಡುವುದಕ್ಕೆ ಲಾಯಕ್ಕು. ಎರಡು ವಾರಕ್ಕಿಂತ ಹೆಚ್ಚಿಗೆ ಇಡೋಕಾಗಲ್ಲ. ನಿಮ್ಮ ಚಿತ್ರ ಇರಲು ಬಿಡಲ್ಲ' ಎಂದು ಅರುಣ್ ಕುಮಾರ್ ಹೇಳಿದ್ದಾಗಿ ಹರೀಶ್ ತಿಳಿಸಿದ್ದಾರೆ.



ಚಿತ್ರ ಚೆನ್ನಾಗಿ ಓಡುತ್ತಿದೆ, ಕೆಂಪೇಗೌಡ ಚಿತ್ರವನ್ನು ಬೇರೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಎಂದು ಅವರು ಕೂಗಾಡಿ ಅರಚಾಡುತ್ತಿದ್ದರೂ ಸಂಬಂಧಿಸಿದವರಿಗೆ ಕಿವುಡು. ಕೆಂಪೇಗೌಡ ಚಿತ್ರದ ನಾಯಕ ನಟ ಸುದೀಪ್ ಫೋನ್ ಕರೆಗೆ ಸಿಗುತ್ತಿಲ್ಲ ಎಂಬುದು ಹರೀಶ್ ಆರೋಪ. ಕೊನೆಗೂ ಪೊಲೀಸರು ಮಧ್ಯ ಪ್ರವೇಶಿಸಿ, ಹರೀಶ್ ರಾಜ್ ಅವರನ್ನು ಮನವೊಲಿಸಿದ್ದರಿಂದ ಅವರು ಹಿಂದೆ ಸರಿದಿದ್ದಾರೆ.



ಈ ಘಟನೆ ಕನ್ನಡ ಚಿತ್ರ ನಿರ್ಮಾಪಕರು ಎದುರಿಸುತ್ತಿರುವ ಥಿಯೇಟರ್ ಸಮಸ್ಯೆಯನ್ನು ಬಟಾಬಯಲು ಮಾಡಿದೆ. ಕನ್ನಡ ಚಿತ್ರಗಳಿಗೆ ದಕ್ಕುವ ಚಿತ್ರಮಂದಿರಗಳೇ ಕಡಿಮೆ. ಸಿಕ್ಕರೂ ದೊಡ್ಡವರು ಅಡಿಯಿಟ್ಟಾಗ ಸೈಲೆಂಟಾಗಿ ದಾರಿ ಮಾಡಿಕೊಡಬೇಕು. ಮಾಡಿಕೊಟ್ಟರೆ, ಕೋಟಿ ಕೋಟಿ ಹಣ ಸುರಿದ ನಿರ್ಮಾಪಕ ನೇಣು ಹಾಕಿಕೊಳ್ಳುವುದೊಂದೇ ಬಾಕಿ. ಇದು ಕನ್ನಡ ಚಿತ್ರರಂಗದ ಸಣ್ಣವರ ಮತ್ತು ದೊಡ್ಡವರ ತಾಕಲಾಟಗಳಿಗೆ ಸಣ್ಣ ಉದಾಹರಣೆ
 

Copyright © 2010 ಸಿನಿಮಾ ಲೋಕ