Keblinger

Keblinger

ರಮ್ಯಾಗೆ ನಿರ್ಮಾಪಕರ ಸಂಘದಿಂದ ಎರಡು ದಿನ ಗಡುವು

| Thursday, March 17, 2011

ದಂಡಂ ದಶಗುಣಂ' ಚಿತ್ರದ ವಿವಾದ ಮತ್ತಷ್ಟು ಬಿಗಡಾಯಿಸಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ರಮ್ಯಾ ವಿರುದ್ಧ ಕ್ರಮಕ್ಕೆ ಮುಂದಾಗಿದೆ. 'ದಂಡಂ ದಶಗುಣಂ; ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ರಮ್ಯಾ ಯಾಕೆ ಬರಲಿಲ್ಲ ಎಂಬ ಬಗ್ಗೆ 48 ಗಂಟೆಗಳಲ್ಲಿ ವಿವರಣೆ ನೀಡುವಂತೆ ಸಂಘ ಫರ್ಮಾನು ಹೊರಡಿಸಿದೆ. 



ಚಿರಂಜೀವಿ ಸರ್ಜಾ ನಾಯಕನ ನಟನಾಗಿರುವ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ರಮ್ಯಾ ಕೈಕೊಟ್ಟಿದ್ದರು. ಇದರಿಂದ ಚಿತ್ರದ ನಿರ್ಮಾಪಕ ಎ ಗಣೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆಡಿಯೋ ಬಿಡುಗಡೆಗೆ ಬರದ ರಮ್ಯಾ ಶಾಪಿಂಗ್‌ನಲ್ಲಿ ಕಾಲ ಕಳೆಯುತ್ತಿದ್ದದ್ದು ನಿರ್ಮಾಪಕರ ಪಿತ್ತ ಕೆರಳಿಸಿತ್ತು.

ರಮ್ಯಾ ವರ್ತನೆ ಬಗ್ಗೆ ಬೇಸತ್ತ ನಿರ್ಮಾಪಕರು ಈ ವಿಷಯವನ್ನು ಫಿಲಂ ಚೇಂಬರ್ ಗಮನಕ್ಕೂ ತಂದರು. ಬಳಿಕ ರಮ್ಯಾ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದರು. ಅತ್ತ ನಿರ್ಮಾಪಕರ ಸಂಘ ಹಾಗೂ ಫಿಲಂ ಚೇಂಬರ್‌ನಲ್ಲಿ ಗಣೇಶ್ ಅವರು ಹಿಡಿತ ಹೊಂದಿದ್ದು ಅವರ ದೂರಿಗೆ ಎರಡೂ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ. 

ಗಣೇಶ್ ಅವರ ದೂರಿಗೆ ತಕ್ಷಣ ಸ್ಪಂದಿಸಿರುವ ನಿರ್ಮಾಪಕರ ಸಂಘ ಕೂಡಲೆ ಫಿಲಂ ಚೇಂಬರ್‌ನಲ್ಲಿ ಸಭೆ ಕರೆದು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದೆ. ಬಳಿಕ 'ದಂಡಂ ದಶಗುಣಂ' ಚಿತ್ರದ ಆಡಿಯೋ ಬಿಡುಗಡೆಗೆ ಯಾಕೆ ಬರಲಿಲ್ಲ ಎಂದು ವಿವರಣೆ ನೀಡುವಂತೆ ರಮ್ಯಾಗೆ ಎರಡು ದಿನಗಳ ಗಡುವು ನೀಡಿ ತೀರ್ಮಾನ ಹೊರಡಿಸಿದೆ. 

ಈ ಎರಡು ದಿನಗಳಲ್ಲಿ ರಮ್ಯಾ ವಿವರಣೆ ನೀಡಲಿಲ್ಲ ಎಂದರೆ ಬಳಿಕ ಮತ್ತೊಮ್ಮೆ ಸಭೆ ಸೇರಿ ರಮ್ಯಾ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಈಗಾಗಲೆ 12 ಗಂಟೆಗಳು ಕಳೆದಿವೆ ರಮ್ಯಾರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆಗುತ್ತದೆ ಎಂಬ ಗ್ಯಾರಂಟಿಯೂ ಇಲ್ಲ.
 

Copyright © 2010 ಸಿನಿಮಾ ಲೋಕ