Keblinger

Keblinger
| Friday, March 25, 2011

ಅಂಬಿ ಸಂಧಾನ ಯಶಸ್ವಿ; ಸುಖಾಂತ್ಯ ಕಂಡ ರಮ್ಯಾ ವಿವಾದ
ಕಳೆದ ಹತ್ತು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದ್ದ ರಮ್ಯಾ ಮತ್ತು 'ದಂಡಂ ದಶಗುಣಂ' ನಿರ್ಮಾಕ ಗಣೇಶ್ ನಡುವಿನ ವಿವಾದಕ್ಕೆ ಗುರುವಾರ (ಮಾ.24) ತೆರೆಬಿದ್ದಿದೆ. ಕನ್ನಡ ಚಿತ್ರರಂಗದ ಹಿರಿಯಣ್ಣ ರೆಬಲ್ ಸ್ಟಾರ್ ಅಂಬರೀಷ್ ಅವರ ಸಮ್ಮುಖದಲ್ಲಿ ರಮ್ಯಾ ಹಾಗೂ ಗಣೇಶ್ ಪರಸ್ಪರ ಕೈಕುಲುಕುವ ಮೂಲಕ ವಿವಾದಕ್ಕೆ ಇಂದು ತೆರೆ ಎಳೆದರು. 
ಗುರುವಾರ ಸಂಜೆ ಅಂಬರೀಷ್ ಅವರು ತಮ್ಮ ಜೆ ಪಿ ನಗರ ನಿವಾಸದಲ್ಲಿ ರಮ್ಯಾ ಹಾಗೂ ಗಣೇಶ್ ಅವರನ್ನು ಕೂರಿಸಿಕೊಂಡು ಇಬ್ಬರಿಗೂ ಬುದ್ಧಿವಾದ ಹೇಳಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಣೇಶ್ ಅವರು ಅಂಬಿ ಸಮ್ಮುಖದಲ್ಲಿ ರಮ್ಯಾಗೆ ನೀಡಬೇಕಿದ್ದ ಬಾಕಿ ಹಣವನ್ನು ಹಿಂತಿರುಗಿಸಿದರು. 

ಬಳಿಕ ಅಂಬರೀಷ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ವಿವಾದ ಬಗೆಹರಿದಿದೆ. ಚಿತ್ರರಂಗದ ಏಳಿಗೆಗೆ ಒಟ್ಟಾಗಿ ಡುಡಿಯೋಣ. ಪ್ರದರ್ಶಕರ ಸಂಘ ಹಾಗೂ ಮುಖ್ಯವಾಗಿ ಡಾ.ರಾಜ್ ಕುಟುಂಬದ ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರಿಂದ ಬೆಂಬಲ ವ್ಯಕ್ತವಾಗಿತ್ತು. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಅಂಬಿ ಹೇಳಿದರು.
ಯಾರ ಮೇಲೂ ನಿಷೇಧ, ಬಹಿಷ್ಕಾರ ಯಾವುದೂ ಇಲ್ಲ ಎಂದು ಅಂಬರೀಷ್ ಗಡುಸು ಧ್ವನಿಯಲ್ಲಿ ಹೇಳಿದ್ದೇ ತಡ ಅಲ್ಲೇ ಇದ್ದ ಫಿಲಂ ಚೇಂಬರ್ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ಕೂಡ ಮುಗುಳ್ನಗುತ್ತಾ ಸ್ವಾಗತಿಸಿದರು. ಈ ಮಾತಿಗೆ ಧ್ವನಿಗೂಡಿಸಿದ ನಿರ್ಮಾಪಕ ಎ ಗಣೇಶ್, ಅಂಬರೀಷ್ ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. 
ರಮ್ಯಾ ಅವರು ಮಾತನಾಡುತ್ತಾ, ಅಂಬರೀಷ್ ಅಂಕಲ್ ಅವರಿಗೆ ತುಂಬಾ ಥ್ಯಾಂಕ್ಸ್ ಎಂದರು. ರಾಕ್ ಲೈನ್ ವೆಂಕಟೇಶ್, ತಾರಾ, ಸರೋಜಾದೇವಿ ಅವರ ಬೆಂಬಲದಿಂದ ಸಮಸ್ಯೆ ಬಗೆಹರಿದಿದೆ. ಇವರೆಲ್ಲಾ ನನಗೆ ಸಹಾಯ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದರು. ಬಳಿಕ ಗಣೇಶ್ ಅವರ ಚಿತ್ರ 'ದಂಡಂ ದಶಗುಣಂ' ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಂಧಾನ ಸಭೆಯಲ್ಲಿ ರಾಜೇಂದ್ರ ಸಿಂಗ್ ಬಾಬು, ಬಸಂತಕುಮಾರ್ ಪಾಟೀಲ್, ಸಾ ರಾ ಗೋವಿಂದು, ರಮ್ಯಾ, ಗಣೇಶ್, ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರರಂಗದ ಹಲವು ತಾರೆಗಳು ಹಾಗೂ ನಿರ್ಮಾಪಕರು ಉಪಸ್ಥಿತರಿದ್ದರು. ರಮ್ಯಾ ವಿವಾದ ಕಲಾವಿದರು ಮತ್ತು ನಿರ್ಮಾಪಕರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿತ್ತು. ಅಂಬರೀಷ್ ಅವರು ಅದನ್ನು ಮುಚ್ಚಿಹಾಕಿದ್ದಾರೆ. ಅವರ ಮುಂದಾಳತ್ವದಲ್ಲಿ ಸಮಸ್ಯೆ ಸುಖಾಂತ್ಯ ಕಂಡಿದ್ದು ನಿಜಕ್ಕೂ ಕನ್ನಡ ಚಿತ್ರರಂಗ ದೊಡ್ಡ ಗಡಾಂತರದಿಂದ ಪಾರಾಗಿದೆ.
 

Copyright © 2010 ಸಿನಿಮಾ ಲೋಕ