
'ಕನಸಿನ ಕನ್ಯೆ' ಅಂದರೆ ಮನಸಿನಲ್ಲಿ ಮೂಡುವುದು ಹೇಮ ಮಾಲಿನಿ! ಆದರೆ ಕನ್ನಡದಲ್ಲಿ ಕನಸಿನ ಕನ್ಯೆಯರಿಲ್ಲವೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೆ ಕಸ್ತೂರಿ ಕನ್ನಡ ವಾಹಿನಿಯ 'ಡ್ರೀಮ್ ಗರ್ಲ್ಸ್, ನಕ್ಷತ್ರ ಲೋಕದ ತಾರೆಗಳು'. ಕನ್ನಡ ಚಿತ್ರರಂಗದ ಹನ್ನೆರಡು ಮಂದಿ ನಟಿಯರಲ್ಲಿ ಒಬ್ಬರನ್ನು ಕನಸಿನ ಕನ್ಯೆಯಾಗಿ ಈ ಕಾರ್ಯಕ್ರಮದ ಮೂಲಕ ಆಯ್ಕೆ ಮಾಡಲಿದ್ದಾರೆ. ಕನಸಿನ ಕನ್ಯೆ ಪಟ್ಟಕ್ಕಾಗಿ ಕೇವಲ ಒಂದೆರಡು ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟಿಯರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿನ ಹನ್ನೆರಡು ನಟಿಯರ ಹೆಸರುಗಳು ಇಂತಿವೆ; ರಾಕಿ ಮತ್ತು ಗುಲಾಮ ಚಿತ್ರದಲ್ಲಿ ನಟಿಸಿದ ಬಿಯಾಂಕ ದೇಸಾಯಿ,ಅಶ್ವಿನಿ (ವರ್ಷಧಾರೆ ), ಸ್ಪೂರ್ವಿ(ಜಾಲ ,ದೀಪು ( ಸರ್ಕಲ್ ರೌಡಿ), ಪ್ರಿಯಾಂಕ (ಟೆನ್ತ್ ಕ್ಲಾಸ್ ),ದೀಪಿಕಾ (ಪಟ್ರೆ ಲವ್ಸ್ ಪದ್ಮಾ),ಯಜ್ಞಾ ಶೆಟ್ಟಿ (ಎದ್ದೇಳು ಮಂಜುನಾಥ), ಸ್ಪೂರ್ತಿ (ಜಾಲಿ ಡೇಸ್), ಭೂಮಿಕಾ(ಪ್ರೇಮ ಧಾರೆ), ಮೋನಿಶಾ (ಪರಿಚಯ), ಅಂಕಿತಾ (ಟ್ಯಾಕ್ಸಿ ನಂ.1)ಹಾಗೂ ವಿದ್ಯಾ.(ಯಾಹೂ) ಇವರಲ್ಲಿ ಒಬ್ಬರಿಗೆ ಮಾತ್ರ ಕನಸಿನ ಕನ್ಯೆ ಕಿರೀಟ ತೊಡಲಿದ್ದಾರೆ. ಇಬ್ಬಿಬ್ಬರಂತೆ ಆರು ತಂಡಗಳನ್ನು ರಚಿಸಿ ಕೊನೆಗೆ ಒಬ್ಬರನ್ನು 'ಡ್ರೀಮ್ ಗರ್ಲ್' ಆಗಿ ಆಯ್ಕೆ ಮಾಡಲಾಗುತ್ತದೆ. ಕನಸಿನ ಕನ್ಯೆಗೆ ರು.10 ಲಕ್ಷ ನಗದು ಬಹುಮಾನ ಹಾಗೂ ದ್ವಿತೀಯ ಕನಸಿನ ಕನ್ಯೆಗೆ ರು.5 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.
ಕಿರುತೆರೆಯಲ್ಲಿ ಕನಸಿನ ಕನ್ಯೆ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಸೋನಿ, ಸ್ಟಾರ್ ಪ್ಲಸ್, ಜೀ ಟಿವಿಗಳು ಡ್ರೀಮ್ ಗರ್ಲ್ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ.ಆದರೆ ಕಸ್ತೂರಿ ಕನ್ನಡ ವಾಹಿನಿ ಪ್ರಸಾರ ಮಾಡಲಿರುವ 'ಡ್ರೀಮ್ ಗರ್ಲ್' ಕಾರ್ಯಕ್ರಮ ಒಂಚೂರು ಭಿನ್ನವಾಗಿರಲಿದೆ.ಇದಕ್ಕಾಗಿ ಗ್ರೀಕ್ ಶೈಲಿಯ ವೇದಿಕೆಯನ್ನು ಮುರಳಿ ಎಂಬುವವರು ನಿರ್ಮಿಸಿದ್ದಾರೆ. ಈ ರೀತಿಯ ವೇದಿಕೆ ಕನ್ನಡ ಕಿರುತೆರೆ ಇತಿಹಾಸದಲ್ಲಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು ಎನ್ನ್ನಲಾಗಿದೆ.
ಜನವರಿ ಎರಡನೇ ವಾರದಿಂದ ಏಪ್ರಿಲ್ ತಿಂಗಳವರೆಗೂ 22 ದಿನಗಳ ಕಾಲ ಚಿತ್ರೀಕರಣ ಸಾಗಲಿದೆ. ಖ್ಯಾತ ನೃತ್ಯ ಸಂಯೋಜಕರಾದ ಮುರಳಿ, ಹರ್ಷ, ಧನಕುಮಾರ್, ಕಿರಣ್, ಯಶವಂತ್, ಶಾಲಿನಿ-ಮಾಲಿನಿ ಸ್ಪರ್ಧಾಳುಗಳಿಗೆ ತರಬೇತುದಾರರು. ಕಸ್ತೂರಿ ಕನ್ನಡ ವಾಹಿನಿಯ ಈ ಹೆಮ್ಮೆಯ ಕಾರ್ಯಕ್ರಮಕ್ಕೆ ಜನಪ್ರಿಯ ನೃತ್ಯ ನಿರ್ದೇಶಕಿ ತಾರಾ ಮೇಡಂನ ಶಿಷ್ಯರಾದ ಉಡುಪಿ ಜಯರಾಮ್ ಮತ್ತು ಇಮ್ರಾನ್ ಸರ್ದಾರಿಯ ಸ್ಪರ್ಧೆಯ ತೀರ್ಪುಗಾರರು.
'ಡ್ರೀಮ್ ಗರ್ಲ್' ನಕ್ಷತ್ರ ಲೋಕದ ತಾರೆಗಳು ಶುಕ್ರವಾರ, ಶನಿವಾರ ಮತ್ತು ಭಾನುವಾರ 42 ವಾರಗಳ ಕಾಲ ಪ್ರಸಾರವಾಗಲಿದೆ. ಪ್ರಸಾರ ಸಮಯವನ್ನು ಕಸ್ತೂರಿ ವಾಹಿನಿ ಶೀಘ್ರದಲ್ಲೇ ಪ್ರಕಟಿಸಲಿದೆ. ಕನ್ನಡಮತ್ತು ತಮಿಳು ನಟಿ ಶಿರೀನ್ ಮತ್ತು ರೇಡಿಯೋ ಜಾಕಿ ಪಲ್ಲವಿ ಅವರು ಡ್ರೀಮ್ ಗರ್ಲ್ಸ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮನಮ್ಮ ಕನಸಿನ ಯೋಜನೆ ಎಂದು ಕಸ್ತೂರಿ ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಾಜಿ ತಿಳಿಸಿದ್ದಾರೆ. ಸಂಚಿಕೆ ನಿರ್ದೇಶನ ಜೆ.ಕೆ.ಸುನಿಲ್ ಕುಮಾರ್ ಅವರದು. ನೃತ್ಯ, ಸೌಂದರ್ಯ, ಫ್ಯಾಷನ್ ಎಲ್ಲ ಮಸಾಲೆಗಳನ್ನು ಹೊಂದಿರುವ ಪ್ಯಾಕೇಜ್ ಕಾರ್ಯಕ್ರಮ ಇದೆನ್ನುತ್ತಾರೆ ಸುನಿಲ್ ಕುಮಾರ್ . 'ಡ್ರೀಮ್ ಗರ್ಲ್ಸ್' ಶೀರ್ಷಿಕೆ ಗೀತೆಯನ್ನು ಚಿತ್ರಸಾಹಿತಿ ಕವಿರಾಜ್ ರಚಿಸಿದ್ದಾರೆ.