ಗೋಲ್ಡನ್ ಗರ್ಲ್ ರಮ್ಯಾ ವಿವಾದ ಇನ್ನೇನು ಸಮಾಪ್ತಿಯಾಯಿತು ಎನ್ನುವಾಗಲೆ ಪೂಜಾಗಾಂಧಿ ವಿವಾದ ತಲೆಯೆತ್ತಿದೆ. ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಹಾಗೂ ಕಲಾವಿದರ ಸಂಘಕ್ಕೆ ಪೂಜಾಗಾಂಧಿ ದೂರು ಸಲ್ಲಿಸಿದ್ದಾರೆ. 'ನೀ ಇಲ್ಲದೆ' ಚಿತ್ರಕ್ಕೆ ಸಂಬಂಧಿಸಿದಂತೆ ಬಾಕಿ ಸಂಭಾವನೆ ಬಂದಿಲ್ಲ ಎಂಬುದು ಪೂಜಾ ದೂರು.

ಶಿವ ಗಣಪತಿ ಆಕ್ಷನ್ ಕಟ್ ಹೇಳಿರುವ ಹಾಗೂ ಚನ್ನಪತಿ ನಾಗಮಲ್ಲೇಶ್ವರಿ ನಿರ್ಮಿಸಿರುವ ಚಿತ್ರ ಮಾರ್ಚ್ 25ರಂದು ತೆರೆಕಾಣಲು ಸಿದ್ಧವಾಗಿದೆ. ಆದರೆ ಈ ಚಿತ್ರಕ್ಕೆ ಕೊಡಬೇಕಾದ ಬಾಕಿ ಹಣ ನನಗೆ ಇನ್ನೂ ಸಂದಾಯವಾಗಿಲ್ಲ ಎಂಬುದು ಪೂಜಾಗಾಂಧಿ ದೂರು.
ಬಾಕಿ ಹಣಕ್ಕೆ ಬದಲಾಗಿ ಆ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಪ್ರದೇಶದವಿತರಣೆ ಹಕ್ಕುಗಳನ್ನು ಪೂಜಾ ಅವರಿಗೆ ನೀಡಲಾಗಿತ್ತು. ಆದರೆ ಪೂಜಾಗಾಂಧಿ ಈ ಒಪ್ಪಂದವನ್ನು ಸುತಾರಾಂ ಒಪ್ಪಲಿಲ್ಲ. ವಿತರಣೆ ಹಕ್ಕುಗಳು ಬೇಡ ಎಂದಿರುವ ಅವರು ಬಾಕಿ ಹಣ ಕೊಡಿ ಎಂದಿದ್ದರು. ಕಡೆಗೂ ಸಮಸ್ಯೆ ಪರಿಹಾರವಾಗದೆ ಫಿಲಂ ಚೇಂಬರ್ ಮೆಟ್ಟಿಲು ಹತ್ತಿದೆ.
ನೀ ಇಲ್ಲದೆ ಚಿತ್ರಕ್ಕೆ ಹೊಸ ವಿವಾದ ತಲೆದೋರಿರುವ ಕಾರಣ ಚಿತ್ರ ಬಿಡುಗಡೆ ಕೊಂಚ ತಡವಾಗುವ ಸಾಧ್ಯತೆಗಳು ಇವೆ. ಪೂಜಾಗಾಂಧಿ ಅವರಿಗೆ ಈಗಾಗಲೆ ಕಲಾವಿದರ ಸಂಘದಿಂದ ಬೆಂಬಲವೂ ವ್ಯಕ್ತವಾಗಿದೆ. ಇದೊಂದು ಪ್ರೇಮಕಥಾನಕ ಚಿತ್ರವಾಗಿದ್ದು ಪೂಜಾಗಾಂಧಿ ಮತ್ತು ರಘು ಮುಖರ್ಜಿ ಮುಖ್ಯಭೂಮಿಕೆಯಲ್ಲಿದ್ದಾರೆ.