Keblinger

Keblinger
| Friday, March 25, 2011

ಅಂಬಿ ಸಂಧಾನ ಯಶಸ್ವಿ; ಸುಖಾಂತ್ಯ ಕಂಡ ರಮ್ಯಾ ವಿವಾದ
ಕಳೆದ ಹತ್ತು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದ್ದ ರಮ್ಯಾ ಮತ್ತು 'ದಂಡಂ ದಶಗುಣಂ' ನಿರ್ಮಾಕ ಗಣೇಶ್ ನಡುವಿನ ವಿವಾದಕ್ಕೆ ಗುರುವಾರ (ಮಾ.24) ತೆರೆಬಿದ್ದಿದೆ. ಕನ್ನಡ ಚಿತ್ರರಂಗದ ಹಿರಿಯಣ್ಣ ರೆಬಲ್ ಸ್ಟಾರ್ ಅಂಬರೀಷ್ ಅವರ ಸಮ್ಮುಖದಲ್ಲಿ ರಮ್ಯಾ ಹಾಗೂ ಗಣೇಶ್ ಪರಸ್ಪರ ಕೈಕುಲುಕುವ ಮೂಲಕ ವಿವಾದಕ್ಕೆ ಇಂದು ತೆರೆ ಎಳೆದರು. 
ಗುರುವಾರ ಸಂಜೆ ಅಂಬರೀಷ್ ಅವರು ತಮ್ಮ ಜೆ ಪಿ ನಗರ ನಿವಾಸದಲ್ಲಿ ರಮ್ಯಾ ಹಾಗೂ ಗಣೇಶ್ ಅವರನ್ನು ಕೂರಿಸಿಕೊಂಡು ಇಬ್ಬರಿಗೂ ಬುದ್ಧಿವಾದ ಹೇಳಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಣೇಶ್ ಅವರು ಅಂಬಿ ಸಮ್ಮುಖದಲ್ಲಿ ರಮ್ಯಾಗೆ ನೀಡಬೇಕಿದ್ದ ಬಾಕಿ ಹಣವನ್ನು ಹಿಂತಿರುಗಿಸಿದರು. 

ಬಳಿಕ ಅಂಬರೀಷ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ವಿವಾದ ಬಗೆಹರಿದಿದೆ. ಚಿತ್ರರಂಗದ ಏಳಿಗೆಗೆ ಒಟ್ಟಾಗಿ ಡುಡಿಯೋಣ. ಪ್ರದರ್ಶಕರ ಸಂಘ ಹಾಗೂ ಮುಖ್ಯವಾಗಿ ಡಾ.ರಾಜ್ ಕುಟುಂಬದ ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರಿಂದ ಬೆಂಬಲ ವ್ಯಕ್ತವಾಗಿತ್ತು. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಅಂಬಿ ಹೇಳಿದರು.
ಯಾರ ಮೇಲೂ ನಿಷೇಧ, ಬಹಿಷ್ಕಾರ ಯಾವುದೂ ಇಲ್ಲ ಎಂದು ಅಂಬರೀಷ್ ಗಡುಸು ಧ್ವನಿಯಲ್ಲಿ ಹೇಳಿದ್ದೇ ತಡ ಅಲ್ಲೇ ಇದ್ದ ಫಿಲಂ ಚೇಂಬರ್ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ಕೂಡ ಮುಗುಳ್ನಗುತ್ತಾ ಸ್ವಾಗತಿಸಿದರು. ಈ ಮಾತಿಗೆ ಧ್ವನಿಗೂಡಿಸಿದ ನಿರ್ಮಾಪಕ ಎ ಗಣೇಶ್, ಅಂಬರೀಷ್ ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. 
ರಮ್ಯಾ ಅವರು ಮಾತನಾಡುತ್ತಾ, ಅಂಬರೀಷ್ ಅಂಕಲ್ ಅವರಿಗೆ ತುಂಬಾ ಥ್ಯಾಂಕ್ಸ್ ಎಂದರು. ರಾಕ್ ಲೈನ್ ವೆಂಕಟೇಶ್, ತಾರಾ, ಸರೋಜಾದೇವಿ ಅವರ ಬೆಂಬಲದಿಂದ ಸಮಸ್ಯೆ ಬಗೆಹರಿದಿದೆ. ಇವರೆಲ್ಲಾ ನನಗೆ ಸಹಾಯ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದರು. ಬಳಿಕ ಗಣೇಶ್ ಅವರ ಚಿತ್ರ 'ದಂಡಂ ದಶಗುಣಂ' ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಂಧಾನ ಸಭೆಯಲ್ಲಿ ರಾಜೇಂದ್ರ ಸಿಂಗ್ ಬಾಬು, ಬಸಂತಕುಮಾರ್ ಪಾಟೀಲ್, ಸಾ ರಾ ಗೋವಿಂದು, ರಮ್ಯಾ, ಗಣೇಶ್, ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರರಂಗದ ಹಲವು ತಾರೆಗಳು ಹಾಗೂ ನಿರ್ಮಾಪಕರು ಉಪಸ್ಥಿತರಿದ್ದರು. ರಮ್ಯಾ ವಿವಾದ ಕಲಾವಿದರು ಮತ್ತು ನಿರ್ಮಾಪಕರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿತ್ತು. ಅಂಬರೀಷ್ ಅವರು ಅದನ್ನು ಮುಚ್ಚಿಹಾಕಿದ್ದಾರೆ. ಅವರ ಮುಂದಾಳತ್ವದಲ್ಲಿ ಸಮಸ್ಯೆ ಸುಖಾಂತ್ಯ ಕಂಡಿದ್ದು ನಿಜಕ್ಕೂ ಕನ್ನಡ ಚಿತ್ರರಂಗ ದೊಡ್ಡ ಗಡಾಂತರದಿಂದ ಪಾರಾಗಿದೆ.

ರಮ್ಯಾ ವಿವಾದ ಆಯ್ತು ಈಗ ಪೂಜಾಗಾಂಧಿ ವಿವಾದ

| Tuesday, March 22, 2011

ಗೋಲ್ಡನ್ ಗರ್ಲ್ ರಮ್ಯಾ ವಿವಾದ ಇನ್ನೇನು ಸಮಾಪ್ತಿಯಾಯಿತು ಎನ್ನುವಾಗಲೆ ಪೂಜಾಗಾಂಧಿ ವಿವಾದ ತಲೆಯೆತ್ತಿದೆ. ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ  ಹಾಗೂ ಕಲಾವಿದರ ಸಂಘಕ್ಕೆ ಪೂಜಾಗಾಂಧಿ ದೂರು ಸಲ್ಲಿಸಿದ್ದಾರೆ. 'ನೀ ಇಲ್ಲದೆ' ಚಿತ್ರಕ್ಕೆ ಸಂಬಂಧಿಸಿದಂತೆ ಬಾಕಿ ಸಂಭಾವನೆ ಬಂದಿಲ್ಲ ಎಂಬುದು ಪೂಜಾ ದೂರು.

ಶಿವ ಗಣಪತಿ ಆಕ್ಷನ್ ಕಟ್ ಹೇಳಿರುವ ಹಾಗೂ ಚನ್ನಪತಿ ನಾಗಮಲ್ಲೇಶ್ವರಿ ನಿರ್ಮಿಸಿರುವ ಚಿತ್ರ ಮಾರ್ಚ್ 25ರಂದು ತೆರೆಕಾಣಲು ಸಿದ್ಧವಾಗಿದೆ. ಆದರೆ ಈ ಚಿತ್ರಕ್ಕೆ ಕೊಡಬೇಕಾದ ಬಾಕಿ ಹಣ ನನಗೆ ಇನ್ನೂ ಸಂದಾಯವಾಗಿಲ್ಲ ಎಂಬುದು ಪೂಜಾಗಾಂಧಿ ದೂರು. 

ಬಾಕಿ ಹಣಕ್ಕೆ ಬದಲಾಗಿ ಆ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಪ್ರದೇಶದವಿತರಣೆ ಹಕ್ಕುಗಳನ್ನು ಪೂಜಾ ಅವರಿಗೆ ನೀಡಲಾಗಿತ್ತು. ಆದರೆ ಪೂಜಾಗಾಂಧಿ ಈ ಒಪ್ಪಂದವನ್ನು ಸುತಾರಾಂ ಒಪ್ಪಲಿಲ್ಲ. ವಿತರಣೆ ಹಕ್ಕುಗಳು ಬೇಡ ಎಂದಿರುವ ಅವರು ಬಾಕಿ ಹಣ ಕೊಡಿ ಎಂದಿದ್ದರು. ಕಡೆಗೂ ಸಮಸ್ಯೆ ಪರಿಹಾರವಾಗದೆ ಫಿಲಂ ಚೇಂಬರ್ ಮೆಟ್ಟಿಲು ಹತ್ತಿದೆ.

ನೀ ಇಲ್ಲದೆ ಚಿತ್ರಕ್ಕೆ ಹೊಸ ವಿವಾದ ತಲೆದೋರಿರುವ ಕಾರಣ ಚಿತ್ರ ಬಿಡುಗಡೆ ಕೊಂಚ ತಡವಾಗುವ ಸಾಧ್ಯತೆಗಳು ಇವೆ. ಪೂಜಾಗಾಂಧಿ ಅವರಿಗೆ ಈಗಾಗಲೆ ಕಲಾವಿದರ ಸಂಘದಿಂದ ಬೆಂಬಲವೂ ವ್ಯಕ್ತವಾಗಿದೆ. ಇದೊಂದು ಪ್ರೇಮಕಥಾನಕ ಚಿತ್ರವಾಗಿದ್ದು ಪೂಜಾಗಾಂಧಿ ಮತ್ತು ರಘು ಮುಖರ್ಜಿ ಮುಖ್ಯಭೂಮಿಕೆಯಲ್ಲಿದ್ದಾರೆ.
|
'ಸತ್ಯಾನಂದ' ಚಿತ್ರದ ನಿರ್ದೇಶಕ, ನಿರ್ಮಾಪಕ ಮದನ್ ಪಟೇಲ್‌ಗೆ ಹೈದರಾಬಾದ್ ವಕೀಲರ ಮೂಲಕ ಸ್ವಾಮಿ ನಿತ್ಯಾನಂದ  ನೋಟೀಸ್ ಜಾರಿ ಮಾಡಿದ್ದಾರೆ. "ಚಿತ್ರದ ನಾಯಕ ನಟನ ಹೋಲಿಕೆ ನನ್ನ ರೀತಿಯೇ ಇದೆ." ಎಂದಿರುವ ಅವರು ಚಿತ್ರೀಕರಣವನ್ನು ಕೂಡಲೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಚಿತ್ರೀಕರಣವನ್ನು ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. 
ಹೈದರಾಬಾದಿನ ವಕೀಲ ಬಿ ಕೃಷ್ಣಕುಮಾರ್ ಮೂಲಕ ಸ್ವಾಮಿ ನಿತ್ಯಾನಂದ ನೋಟೀಸ್ ಜಾರಿ ಮಾಡಿದ್ದು, ನಿತ್ಯಾನಂದ ಹೆಸರು ಬಳಸಿ ಚಿತ್ರ ನಿರ್ಮಿಸದಂತೆ ಸೂಚಿಸಲಾಗಿದೆ. ಸತ್ಯಾನಂದ ಚಿತ್ರ ಮಾರ್ಚ್ 6ರಂದು ಸೆಟ್ಟೇರಿತ್ತು. ಸೆಟ್ಟೇರಿದ ಎರಡೇ ದಿನಗಳಲ್ಲಿ ಮಾರ್ಚ್ 8ರಂದು ನೋಟೀಸ್ ಬಂದಿರುವುದಾಗಿ ಮದನ್ ಪಟೇಲ್ ವಿವರ ನೀಡಿದ್ದಾರೆ.

"ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಾ. ನೀವೇನು ತಪ್ಪು ಮಾಡಿಲ್ಲ ಎನ್ನುವುದಾದರೆ ನೀವ್ಯಾಕೆ ಹೆದರುತ್ತೀರಾ. ಒಂದು ವೇಳೆ ಚಿತ್ರದಲ್ಲಿನ ಪಾತ್ರಗಳು ನಿಮ್ಮನ್ನೇ ಹೋಲುವಂತಿದ್ದರೆ ಕೋರ್ಟ್‌ಗೆ ಹೋಗಿ. ಅಲ್ಲೇ ಇತ್ಯರ್ಥವಾಗಲಿ" ಎಂದು ಮದನ್ ಪಟೇಲ್ ನೋಟೀಸಿಗೆ ಉತ್ತರ ನೀಡಿರುವುದಾಗಿ ಹೇಳಿದ್ದಾರೆ. 


ಬೆಳಗಾವಿ  ವಿಶ್ವಕನ್ನಡ ಸಮ್ಮೇಳನ ನಿಮಿತ್ತ ಐದು ದಿನ ಬಿಡುವು ನೀಡಿದ್ದ ಕಾರಣ ಸತ್ಯಾನಂದ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈಗ ಚಿತ್ರೀಕರಣ ಭರದಿಂದ ಸಾಗಿದೆ. ಸತ್ಯಾನಂದ ಚಿತ್ರೀಕರಣವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ರವಿಚೇತನ್ ಎಂಬುವವರು 'ಸತ್ಯಾನಂದ'ನ ಪಾತ್ರವನ್ನು ಪೋಷಿಸುತ್ತಿದ್ದಾರೆ.

ರಂಜಿತಾ ಪಾತ್ರ ಮಾಡ್ತಾರಂತೆ ದುಂಡು ಮಲ್ಲಿಗೆ ನಮಿತಾ!

ಸ್ವಾಮಿ ನಿತ್ಯಾನಂದ  ಕುರಿತ ವಿವಾದಾತ್ಮಕ ಚಿತ್ರವನ್ನು ಮದನ್ ಪಟೇಲ್ ಕೈಗೆತ್ತಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರಕ್ಕೆ ಅವರು 'ಸತ್ಯಾನಂದ' ಎಂದು ಹೆಸರಿಟ್ಟಿದ್ದಾರೆ. ಸ್ವಾಮಿ ನಿತ್ಯಾನಂದ ನೈಜಕತೆ ಎಂದ ಮೇಲೆ ರಂಜಿತಾ ಇರದಿದ್ದರೆ ಹೇಗೆ. ಈ ಪಾತ್ರಕ್ಕಾಗಿ ಸ್ವತಃ ರಂಜಿತಾ ಅವರನ್ನೇ ಮದನ್ ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದರು.

ಕಡೆಗೆ ರಂಜಿತಾ ಪಾತ್ರವನ್ನು ಪೋಷಿಸಲು ಸೆಕ್ಸಿ ತಾರೆ ನಮಿತಾರನ್ನು ಆಹ್ವಾನಿಸಿದ್ದಾರೆ. ಆದರೆ ನಮಿತಾ ಈ ಪಾತ್ರಕ್ಕೆ ಜೀವ ತುಂಬಲು ಊ ಅಂದಿದ್ದಾರೋ ಊಹುಂ ಅಂದಿದ್ದಾರೋ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಆಕೆಯನ್ನು ಕರೆತರುವ ಎಲ್ಲ ಸಿದ್ಧತೆಗಳನ್ನು ಮದನ್ ಮಾಡುತ್ತಿದ್ದಾರೆ. ನಮಿತಾ ಸಿಗದಿದ್ದರೆ ಚಾರ್ಮಿ ಕೌರ್ ಅವರನ್ನು ಕರೆತರುವುದಾಗಿ ಮದನ್ ಹೇಳಿದ್ದಾರೆ.ಆದರೆ ಇನ್ನೂ ಯಾರು ಎಂಬುದು ಕನ್ಫರ್ಮ್ ಆಗಿಲ್ಲ.

ಅಂದಹಾಗೆ ನಿತ್ಯಾನಂದನ ಪಾತ್ರವನ್ನು ರವಿ ಚೇತನ್ ಎಂಬುವವರು ಪೋಷಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮಹಾರಾಣಿ ಕಾಲೇಜು ಮುಂದಿನ ಫ್ರೀಡಂ ಪಾರ್ಕಿನಲ್ಲಿ ಭರದಿಂದ ಸಾಗಿದೆ. 'ಕೋಟಿಗೊಬ್ಬ' ಚಿತ್ರದ ಮೂಲಕ ರವಿ ಚೇತನ್ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಬಳಿಕ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದರು. ಇದೊಂದು ಚತುರ್ಭಾಷಾ ಚಿತ್ರ ಎನ್ನುತ್ತಾರೆ ಮದನ್.

ಕರ್ನಾಟಕದ ಕನಸಿನ ಕನ್ಯೆ ಯಾರು,ಯಾರು?

| Thursday, March 17, 2011

 'ಕನಸಿನ ಕನ್ಯೆ' ಅಂದರೆ ಮನಸಿನಲ್ಲಿ ಮೂಡುವುದು ಹೇಮ ಮಾಲಿನಿ! ಆದರೆ ಕನ್ನಡದಲ್ಲಿ ಕನಸಿನ ಕನ್ಯೆಯರಿಲ್ಲವೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೆ ಕಸ್ತೂರಿ ಕನ್ನಡ ವಾಹಿನಿಯ 'ಡ್ರೀಮ್ ಗರ್ಲ್ಸ್, ನಕ್ಷತ್ರ ಲೋಕದ ತಾರೆಗಳು'. ಕನ್ನಡ ಚಿತ್ರರಂಗದ ಹನ್ನೆರಡು ಮಂದಿ ನಟಿಯರಲ್ಲಿ ಒಬ್ಬರನ್ನು ಕನಸಿನ ಕನ್ಯೆಯಾಗಿ ಈ ಕಾರ್ಯಕ್ರಮದ ಮೂಲಕ ಆಯ್ಕೆ ಮಾಡಲಿದ್ದಾರೆ. ಕನಸಿನ ಕನ್ಯೆ ಪಟ್ಟಕ್ಕಾಗಿ ಕೇವಲ ಒಂದೆರಡು ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟಿಯರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. 


ಸ್ಪರ್ಧೆಯಲ್ಲಿನ ಹನ್ನೆರಡು ನಟಿಯರ ಹೆಸರುಗಳು ಇಂತಿವೆ; ರಾಕಿ ಮತ್ತು ಗುಲಾಮ ಚಿತ್ರದಲ್ಲಿ ನಟಿಸಿದ ಬಿಯಾಂಕ ದೇಸಾಯಿ,ಅಶ್ವಿನಿ (ವರ್ಷಧಾರೆ ), ಸ್ಪೂರ್ವಿ(ಜಾಲ ,ದೀಪು ( ಸರ್ಕಲ್ ರೌಡಿ), ಪ್ರಿಯಾಂಕ (ಟೆನ್ತ್ ಕ್ಲಾಸ್ ),ದೀಪಿಕಾ (ಪಟ್ರೆ ಲವ್ಸ್ ಪದ್ಮಾ),ಯಜ್ಞಾ ಶೆಟ್ಟಿ (ಎದ್ದೇಳು ಮಂಜುನಾಥ), ಸ್ಪೂರ್ತಿ (ಜಾಲಿ ಡೇಸ್), ಭೂಮಿಕಾ(ಪ್ರೇಮ ಧಾರೆ), ಮೋನಿಶಾ (ಪರಿಚಯ), ಅಂಕಿತಾ (ಟ್ಯಾಕ್ಸಿ ನಂ.1)ಹಾಗೂ ವಿದ್ಯಾ.(ಯಾಹೂ) ಇವರಲ್ಲಿ ಒಬ್ಬರಿಗೆ ಮಾತ್ರ ಕನಸಿನ ಕನ್ಯೆ ಕಿರೀಟ ತೊಡಲಿದ್ದಾರೆ. ಇಬ್ಬಿಬ್ಬರಂತೆ ಆರು ತಂಡಗಳನ್ನು ರಚಿಸಿ ಕೊನೆಗೆ ಒಬ್ಬರನ್ನು 'ಡ್ರೀಮ್ ಗರ್ಲ್' ಆಗಿ ಆಯ್ಕೆ ಮಾಡಲಾಗುತ್ತದೆ. ಕನಸಿನ ಕನ್ಯೆಗೆ ರು.10 ಲಕ್ಷ ನಗದು ಬಹುಮಾನ ಹಾಗೂ ದ್ವಿತೀಯ ಕನಸಿನ ಕನ್ಯೆಗೆ ರು.5 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. 

ಕಿರುತೆರೆಯಲ್ಲಿ ಕನಸಿನ ಕನ್ಯೆ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಸೋನಿ, ಸ್ಟಾರ್ ಪ್ಲಸ್, ಜೀ ಟಿವಿಗಳು ಡ್ರೀಮ್ ಗರ್ಲ್ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ.ಆದರೆ ಕಸ್ತೂರಿ ಕನ್ನಡ ವಾಹಿನಿ ಪ್ರಸಾರ ಮಾಡಲಿರುವ 'ಡ್ರೀಮ್ ಗರ್ಲ್' ಕಾರ್ಯಕ್ರಮ ಒಂಚೂರು ಭಿನ್ನವಾಗಿರಲಿದೆ.ಇದಕ್ಕಾಗಿ ಗ್ರೀಕ್ ಶೈಲಿಯ ವೇದಿಕೆಯನ್ನು ಮುರಳಿ ಎಂಬುವವರು ನಿರ್ಮಿಸಿದ್ದಾರೆ. ಈ ರೀತಿಯ ವೇದಿಕೆ ಕನ್ನಡ ಕಿರುತೆರೆ ಇತಿಹಾಸದಲ್ಲಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು ಎನ್ನ್ನಲಾಗಿದೆ. 

ಜನವರಿ ಎರಡನೇ ವಾರದಿಂದ ಏಪ್ರಿಲ್ ತಿಂಗಳವರೆಗೂ 22 ದಿನಗಳ ಕಾಲ ಚಿತ್ರೀಕರಣ ಸಾಗಲಿದೆ. ಖ್ಯಾತ ನೃತ್ಯ ಸಂಯೋಜಕರಾದ ಮುರಳಿ, ಹರ್ಷ, ಧನಕುಮಾರ್, ಕಿರಣ್, ಯಶವಂತ್, ಶಾಲಿನಿ-ಮಾಲಿನಿ ಸ್ಪರ್ಧಾಳುಗಳಿಗೆ ತರಬೇತುದಾರರು. ಕಸ್ತೂರಿ ಕನ್ನಡ ವಾಹಿನಿಯ ಈ ಹೆಮ್ಮೆಯ ಕಾರ್ಯಕ್ರಮಕ್ಕೆ ಜನಪ್ರಿಯ ನೃತ್ಯ ನಿರ್ದೇಶಕಿ ತಾರಾ ಮೇಡಂನ ಶಿಷ್ಯರಾದ ಉಡುಪಿ ಜಯರಾಮ್ ಮತ್ತು ಇಮ್ರಾನ್ ಸರ್ದಾರಿಯ ಸ್ಪರ್ಧೆಯ ತೀರ್ಪುಗಾರರು. 

'ಡ್ರೀಮ್ ಗರ್ಲ್' ನಕ್ಷತ್ರ ಲೋಕದ ತಾರೆಗಳು ಶುಕ್ರವಾರ, ಶನಿವಾರ ಮತ್ತು ಭಾನುವಾರ 42 ವಾರಗಳ ಕಾಲ ಪ್ರಸಾರವಾಗಲಿದೆ. ಪ್ರಸಾರ ಸಮಯವನ್ನು ಕಸ್ತೂರಿ ವಾಹಿನಿ ಶೀಘ್ರದಲ್ಲೇ ಪ್ರಕಟಿಸಲಿದೆ. ಕನ್ನಡಮತ್ತು ತಮಿಳು ನಟಿ ಶಿರೀನ್ ಮತ್ತು ರೇಡಿಯೋ ಜಾಕಿ ಪಲ್ಲವಿ ಅವರು ಡ್ರೀಮ್ ಗರ್ಲ್ಸ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮನಮ್ಮ ಕನಸಿನ ಯೋಜನೆ ಎಂದು ಕಸ್ತೂರಿ ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಾಜಿ ತಿಳಿಸಿದ್ದಾರೆ. ಸಂಚಿಕೆ ನಿರ್ದೇಶನ ಜೆ.ಕೆ.ಸುನಿಲ್ ಕುಮಾರ್ ಅವರದು. ನೃತ್ಯ, ಸೌಂದರ್ಯ, ಫ್ಯಾಷನ್ ಎಲ್ಲ ಮಸಾಲೆಗಳನ್ನು ಹೊಂದಿರುವ ಪ್ಯಾಕೇಜ್ ಕಾರ್ಯಕ್ರಮ ಇದೆನ್ನುತ್ತಾರೆ ಸುನಿಲ್ ಕುಮಾರ್ . 'ಡ್ರೀಮ್ ಗರ್ಲ್ಸ್' ಶೀರ್ಷಿಕೆ ಗೀತೆಯನ್ನು ಚಿತ್ರಸಾಹಿತಿ ಕವಿರಾಜ್ ರಚಿಸಿದ್ದಾರೆ.

ರಮ್ಯಾಗೆ ನಿರ್ಮಾಪಕರ ಸಂಘದಿಂದ ಎರಡು ದಿನ ಗಡುವು

|

ದಂಡಂ ದಶಗುಣಂ' ಚಿತ್ರದ ವಿವಾದ ಮತ್ತಷ್ಟು ಬಿಗಡಾಯಿಸಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ರಮ್ಯಾ ವಿರುದ್ಧ ಕ್ರಮಕ್ಕೆ ಮುಂದಾಗಿದೆ. 'ದಂಡಂ ದಶಗುಣಂ; ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ರಮ್ಯಾ ಯಾಕೆ ಬರಲಿಲ್ಲ ಎಂಬ ಬಗ್ಗೆ 48 ಗಂಟೆಗಳಲ್ಲಿ ವಿವರಣೆ ನೀಡುವಂತೆ ಸಂಘ ಫರ್ಮಾನು ಹೊರಡಿಸಿದೆ. 



ಚಿರಂಜೀವಿ ಸರ್ಜಾ ನಾಯಕನ ನಟನಾಗಿರುವ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ರಮ್ಯಾ ಕೈಕೊಟ್ಟಿದ್ದರು. ಇದರಿಂದ ಚಿತ್ರದ ನಿರ್ಮಾಪಕ ಎ ಗಣೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆಡಿಯೋ ಬಿಡುಗಡೆಗೆ ಬರದ ರಮ್ಯಾ ಶಾಪಿಂಗ್‌ನಲ್ಲಿ ಕಾಲ ಕಳೆಯುತ್ತಿದ್ದದ್ದು ನಿರ್ಮಾಪಕರ ಪಿತ್ತ ಕೆರಳಿಸಿತ್ತು.

ರಮ್ಯಾ ವರ್ತನೆ ಬಗ್ಗೆ ಬೇಸತ್ತ ನಿರ್ಮಾಪಕರು ಈ ವಿಷಯವನ್ನು ಫಿಲಂ ಚೇಂಬರ್ ಗಮನಕ್ಕೂ ತಂದರು. ಬಳಿಕ ರಮ್ಯಾ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದರು. ಅತ್ತ ನಿರ್ಮಾಪಕರ ಸಂಘ ಹಾಗೂ ಫಿಲಂ ಚೇಂಬರ್‌ನಲ್ಲಿ ಗಣೇಶ್ ಅವರು ಹಿಡಿತ ಹೊಂದಿದ್ದು ಅವರ ದೂರಿಗೆ ಎರಡೂ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ. 

ಗಣೇಶ್ ಅವರ ದೂರಿಗೆ ತಕ್ಷಣ ಸ್ಪಂದಿಸಿರುವ ನಿರ್ಮಾಪಕರ ಸಂಘ ಕೂಡಲೆ ಫಿಲಂ ಚೇಂಬರ್‌ನಲ್ಲಿ ಸಭೆ ಕರೆದು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದೆ. ಬಳಿಕ 'ದಂಡಂ ದಶಗುಣಂ' ಚಿತ್ರದ ಆಡಿಯೋ ಬಿಡುಗಡೆಗೆ ಯಾಕೆ ಬರಲಿಲ್ಲ ಎಂದು ವಿವರಣೆ ನೀಡುವಂತೆ ರಮ್ಯಾಗೆ ಎರಡು ದಿನಗಳ ಗಡುವು ನೀಡಿ ತೀರ್ಮಾನ ಹೊರಡಿಸಿದೆ. 

ಈ ಎರಡು ದಿನಗಳಲ್ಲಿ ರಮ್ಯಾ ವಿವರಣೆ ನೀಡಲಿಲ್ಲ ಎಂದರೆ ಬಳಿಕ ಮತ್ತೊಮ್ಮೆ ಸಭೆ ಸೇರಿ ರಮ್ಯಾ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಈಗಾಗಲೆ 12 ಗಂಟೆಗಳು ಕಳೆದಿವೆ ರಮ್ಯಾರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆಗುತ್ತದೆ ಎಂಬ ಗ್ಯಾರಂಟಿಯೂ ಇಲ್ಲ.

ಮನನೊಂದ ರಮ್ಯಾ ಚಿತ್ರರಂಗಕ್ಕೆ ಸ್ವಯಂ ನಿವೃತ್ತಿ ಘೋಷಣೆ

|
'ದಂಡಂ ದಶಗುಣಂ' ಚಿತ್ರದಕಿರಿಕಿರಿಯಿಂದ ಬೇಸತ್ತಿರುವ ನಟಿ ರಮ್ಯಾ ಚಿತ್ರರಂಗಕ್ಕೆ ಸ್ವಯಂ ನಿವೃತ್ತಿ ಘೋಷಿಸುತ್ತಿರುವುದಾಗಿ ಹೇಳಿದ್ದಾರೆ. ಈ ರೀತಿಯ ಘಟನೆಗಳ ವಿರುದ್ಧ ಹೋರಾಟ ಮಾಡುವ ಶಕ್ತಿ ನನ್ನ ಬಳಿ ಇಲ್ಲ. ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಮೈಕ್ರೋ ಬ್ಲಾಗಿಂಗ್ ತಾಣಟ್ವಿಟ್ಟರ್‌ನಲ್ಲಿ ಘಂಟಾಘೋಷಾಗಿ ಹೇಳಿದ್ದಾರೆ.


"ಸ್ವತಂತ್ರವಾಗಿ ಬದುಕುತ್ತಿರುವ ಮಹಿಳೆಯೊಬ್ಬಳಿಗೆ ಮಾಧ್ಯಮಗಳಿಂದ ಯಾವುದೇ ಬೆಂಬಲವಿಲ್ಲ...ಇನ್ನು ಮುಂದೆ ಯಾವುದೇ ಕಾರಣಕ್ಕೂ ಚಿತ್ರಗಳಲ್ಲಿ ನಟಿಸುವುದಿಲ್ಲ. ನನ್ನ ಬಳಿ ಹೋರಾಡುವ ಶಕ್ತಿಯೂ ಇಲ್ಲ. ನಾನು ಸ್ವಯಂ ನಿವೃತ್ತಿ ಘೋಷಿಸುತ್ತಿದ್ದೇನೆ. ಹೊಸ ಜೀವನನ್ನು ಶುರು ಮಾಡಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.
'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಗಣೇಶ್ ಬಗ್ಗೆಯೂ ರಮ್ಯಾ ಕೆಂಡಕಾರಿದ್ದಾರೆ. ಕಳೆದ ಆರು ತಿಂಗಳಿಂದ ನನ್ನ ದೂರವಾಣಿ ಕರೆಗಳಿಗೆ ಗಣೇಶ್ ಯಾಕೆ ಉತ್ತರ ನೀಡುತ್ತಿಲ್ಲ? ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಆಡಿಯೋ ಬಿಡುಗಡೆಗೆ ನಾನು ಬರದೆ ಇರುವುದು ಗಣೇಶ್‌ಗೆ ಲಾಭವೇ ಆಗಿದೆ. 'ದಂಡಂ ದಶಗುಣಂ' ಚಿತ್ರಕ್ಕೆ ಬಿಟ್ಟಿ ಪ್ರಚಾರ ಸಿಕ್ಕಿದೆ. ಒಂದು ವೇಳೆ ನಾನು ಆಡಿಯೋ ಬಿಡುಗಡೆಗೆ ಬಂದಿದ್ದರೆ ಹೀಗಾಗುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.

ಗಂಡ ಹೆಂಡತಿ ಸಂಜನಾ ಟಾಪ್‌ಲೆಸ್ ಸುದ್ದಿ ಬೇಸ್ ಲೆಸ್!

| Wednesday, March 16, 2011
'ಗಂಡ ಹೆಂಡತಿ' ಖ್ಯಾತಿಯ ಸಂಜನಾ ತೆಲುಗಿನಲ್ಲಿ ಬ್ಯುಸಿಯಾಗಿರುವುದು ಗೊತ್ತೆ ಇದೆಯಲ್ಲಾ. ಈಗವರು 'ದುಶ್ಯಾಸನ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಟಾಪ್ ಲೆಸ್‌ನಲ್ಲಿ ಕಾಣಿಸಲಿದ್ದಾರೆ ಎಂಬ ಸುದ್ದಿ ಪಡ್ಡೆಗಳ ಪಾಲಿಗೆ ಪುಳಕ ನೀಡಿತ್ತು. ಆದರೆ ಈ ಸುದ್ದಿಯನ್ನು ಸಂಜನಾ ಅಲ್ಲಗಳೆಯುವ ಮೂಲಕ ತಣ್ಣೀರೆರಚಿದ್ದಾರೆ.
ಎಷ್ಟೇ ದೊಡ್ಡ ನಟನಾಗಿರಲಿ ನಾನು ಈ ರೀತಿಯ ಅಸಭ್ಯ ದೃಶ್ಯಗಳಲ್ಲಿ ನಟಿಸುವುದಿಲ್ಲ" ಎಂದು ಸಂಜನಾ ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಸನ್ನಿವೇಶವೊಂದಕ್ಕೆ ಚರ್ಮದ ಬಣ್ಣದ ಬಟ್ಟೆಯನ್ನು ಬಳಲಾಗಿದೆ. ಖಳನಟ ಮತ್ತು ಈಕೆಯ ನಡುವಿನ ಸನ್ನಿವೇಶವೊಂದರಲ್ಲಿ ಬಟ್ಟೆ ಹರಿದುಹೋಗುತ್ತದಂತೆ. ಅದನ್ನು ಕೊಂಚ ಮಸುಕು ಮಾಡಿ ತೋರಿಸಲಾಗಿದೆ. ಅದನ್ನೇ ಟಾಪ್ ಲೆಸ್ ದೃಶ್ಯ ಎಂದು ಬಿಂಬಿಸಲಾಗಿದೆ ಎಂದು ಸಂಜನಾ ಹೇಳಿದ್ದಾರೆ.
ಈ ಹಿಂದೆ ಕ್ರಿಕೆಟಿಗ ಶ್ರೀಶಾಂತ್‌ಗೆ ಚುಂಬನ ನೀಡುವ ಮೂಲಕ ಸಂಜನಾ ಸಖತ್ ಸುದ್ದಿ ಮಾಡಿದ್ದರು. ಗೋವಾ ತೀರದಲ್ಲಿ ಶ್ರೀಶಾಂತ್ ನನ್ನು ಅಪ್ಪಿ ಮುದ್ದಾಡಿ ಹೊಸ ವರ್ಷವನ್ನು ಗಲ್ ರಾಣಿ ಬರಮಾಡಿಕೊಂಡಿದ್ದರು. ಆದರೆ ಚುಂಬನ, ಬಾಹುಬಂಧನ, ಆಲಿಂಗನ ಎಂತಹದ್ದು ಇಲ್ಲ ಎಂದು ಸಂಜನಾ ಬಳಿಕ ಸಮಜಾಯಿಷಿ ನೀಡಿದ್ದರು.

ಜಾಕಿ ಫ್ರಮ್ ಜಂಗಲ್ ಹಳ್ಳಿ ಹೈದನ ಹೊಸ ಅವತಾರ!

| Tuesday, March 15, 2011
ಪುನೀತ್ ಅಭಿನಯದ ಜಾಕಿ ಬಂತು, ಸಕ್ಸಸ್ಸೂ ಆಯ್ತು. ದುಡ್ಡೂ ಬಂತು, ನಿರ್ಮಾಪಕರ ಜೇಬೂ ತುಂಬ್ತು. ಈಗ ಅದೇ ಜಾಕಿ ಹೆಸರಿನ ಹಿಂದೆ ಹೊರಟಿದ್ದಾರೆ ನಿರ್ದೇಶಕ ರವಿ ಕಡೂರು.

ರವಿ ನಿರ್ದೇಶನದ ಹೊಸ ಚಿತ್ರದ ಹೆಸರು-ಜಂಗಲ್ ಜಾಕಿ. ಇದು ಪಕ್ಕಾ ಕಮರ್ಷಿಯಲ್ ಚಿತ್ರ. ಸುವರ್ಣ ವಾಹಿನಿಯ "ಹಳ್ಳಿ ಹೈದ ಪ್ಯಾಟೇಗ್ ಬಂದ" ರಿಯಾಲಿಟಿ ಶೋದಲ್ಲಿ ಗೆಲುವು ಸಾಧಿಸಿ, ಮನೆಮಾತಾಗಿರುವ ರಾಜೇಶ್ ಈ ಚಿತ್ರದ ನಾಯಕ. ರಾಜೇಶ್ ಪುನೀತ್ ಪಕ್ಕಾ ಅಭಿಮಾನಿಯಾಗಿರುವುದರಿಂದ ಜಂಗಲ್ ಜಾಕಿ ಎಂಬ ಹೆಸರು ಒಂಥರಾ ಮ್ಯಾಚ್ ಆಗುತ್ತೆ ಎನ್ನಬಹುದು.

ರಾಜೇಶ, ಐಶೂ ಜೋಡಿ: ಅದೇ ರಾಜೇಶನ ಜೋಡಿಯಾಗಿ ಒಂದಷ್ಟು ಕಿತ್ತಾಡಿ, ಜನರಿಗೆ ಇಷ್ಟವಾಗಿರು ಐಶು ನಾಯಕಿ. ಇವರಿಬ್ಬರನ್ನೂ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿರುವ ರವಿ, ತಾಜ್‌ಮಹಲ್ ಚಂದ್ರು ಜೊತೆ ಮೈಲಾರಿ ಮತ್ತು ಪ್ರೇಮ್ ಕಹಾನಿ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರು.

ಕಾಡಿನಿಂದ ಪ್ಯಾಟೆಗೆ ಬಂದ ಹುಡುಗನಿಗೆ ಐಸು ಸಿಗುತ್ತಾಳೆ. ಅಲ್ಲಿಂದ ಕತೆ ಓಪನ್ ಆಗುತ್ತದೆ. ಎರಡು ತಾಸು ಎಂಜಾಯ್ ಮಾಡಬೇಕೆಂದು ಬರುವ ಪ್ರೇಕ್ಷಕರಿಗೆ ಇಡೀ ಸಿನಿಮಾ ಮಜಾ ಕೊಡುತ್ತದೆ ಎನ್ನುತ್ತಾರೆ ರವಿ.

ವಿ. ಮನೋಹರ್ ಸಂಗೀತವಿದ್ದು, ನಾಲ್ಕು ಹಾಡುಗಳಿವೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಜೋಗಿಯಿಂದ ಮನೆಮಾತಾಗಿರುವ ಎಂ.ಆರ್.ಸೀನು ಛಾಯಾಗ್ರಹಣವಿದೆ. ಸೋಮವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಮಹೂರ್ತ ನಡೆದಿದ್ದು, ನಂತರ ಚಿತ್ರೀಕರಣ ಮುಂದುವರಿಯಲಿದೆ.

ಹುಡುಗಾಟ ಚಿತ್ರದಿಂದ ಹೆಸರು ಮಾಡಿರುವ ಪ್ರಕಾಶ್ ಸಂಕಲವಿದ್ದು, ಪತ್ರಕರ್ತ ವಿನಾಯಕರಾಮ್ ಕಲಗಾರು ಸಂಭಾಷಣೆ ಬರೆದಿದ್ದಾರೆ. ಹಿಂದೆ ಮಳೆಯಲಿ ಜೊತೆಯಲಿ ಚಿತ್ರಕ್ಕೆ ಕೂಡಾ ಕಲಗಾರು ಸಂಭಾಷಣೆ ಬರೆದಿದ್ದರು.

ನಿರ್ಮಾಣದ ಜವಾಬ್ದಾರಿಯನ್ನು ಭಾರ್ಗವ ತೇಜ್ ವಹಿಸಿದ್ದಾರೆ. ಅಂದಹಾಗೇ ಚಿತ್ರಕ್ಕೆ ಐಶು ಲವ್ಸ್ ರಾಜು ಎಂದು ಹೆಸರಿಡಬೇಕಿತ್ತು. ಐಸು ಹೆಸರನ್ನು ನಿರ್ಮಾಪಕ ರಾಮು ಅವರು ಇದಾಗಲೇ ರಿಜಿಸ್ಟರ್ ಮಾಡಿದ್ದರಿಂದ ಅದು ಜಂಗಲ್ ಜಾಕಿಯಾಗಿ ಬದಲಾಗಿದೆ.
| Tuesday, March 8, 2011
ಗನ್ ಎತ್ತಂಗಡಿ, ಹರೀಶ್ ಆತ್ಮಹತ್ಯೆ ಬೆದರಿಕೆ

ಗನ್ ಚಿತ್ರವನ್ನು ನಿರ್ದೇಶಿಸಿರುವ ನಟ ಹರೀಶ್ ರಾಜ್ ಅವರು ಸಂತೋಷ್ ಚಿತ್ರಮಂದಿರದ ಮೇಲೆ ಹತ್ತಿ ಕೈಯಲ್ಲಿ ಚಾಕು ಹಿಡಿದು, ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಘಟನೆ ಇಂದು ಬೆಳಿಗ್ಗೆ ಘಟನೆ ನಡೆದಿದೆ.


ಗನ್ ಚಿತ್ರವನ್ನು ಎರಡೇ ವಾರದಲ್ಲಿ ಎತ್ತಂಗಡಿ ಮಾಡಿ ಸಂತೋಷ್ ಚಿತ್ರಮಂದಿರದಲ್ಲಿ ಸುದೀಪ್ ನಟನೆ ಮತ್ತು ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ ಕೆಂಪೇಗೌಡವನ್ನು ಬಿಡುಗಡೆ ಮಾಡಲು ನಿರ್ಧಾರ ನಡೆಸಿದ್ದೇ ಹರೀಶ್ ರಾಜ್ ಅವರ ಆತ್ಮಹತ್ಯೆ ಯತ್ನಕ್ಕೆ ಕಾರಣ. ಗನ್ ಚಿತ್ರ ಹರೀಶ್ ರಾಜ್ ಅವರ ಎರಡನೇ ಚಿತ್ರ. ಮೊದಲ ಚಿತ್ರ ಕಲಾಕಾರ್ ನಿರ್ದೇಶಿಸಿ, ನಾಯಕ ನಟನಾಗಿ ನಟಿಸಿದ್ದರು.



ಸಂತೋಷ್ ಥಿಯೇಟರ್ ಮಾಲಿಕ ಅರುಣ್ ಕುಮಾರ್ ಅವರು ಫೋನ್ ಮಾಡಿ ಬರುವ ವಾರ ಮಾ.11ರಂದು ಥಿಯೇಟರನ್ನು ಕೆಂಪೇಗೌಡ ಚಿತ್ರಕ್ಕೆ ಬಿಟ್ಟುಕೊಡಬೇಕೆಂದು ಆಜ್ಞೆ ನೀಡಿದ್ದಾಗಿ ಹರೀಶ್ ಆರೋಪಿಸಿದ್ದಾರೆ. ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರೂ, 'ನಿಮ್ಮ ಚಿತ್ರ ಎರಡು ವಾರ ಮಾತ್ರ ಓಡುವುದಕ್ಕೆ ಲಾಯಕ್ಕು. ಎರಡು ವಾರಕ್ಕಿಂತ ಹೆಚ್ಚಿಗೆ ಇಡೋಕಾಗಲ್ಲ. ನಿಮ್ಮ ಚಿತ್ರ ಇರಲು ಬಿಡಲ್ಲ' ಎಂದು ಅರುಣ್ ಕುಮಾರ್ ಹೇಳಿದ್ದಾಗಿ ಹರೀಶ್ ತಿಳಿಸಿದ್ದಾರೆ.



ಚಿತ್ರ ಚೆನ್ನಾಗಿ ಓಡುತ್ತಿದೆ, ಕೆಂಪೇಗೌಡ ಚಿತ್ರವನ್ನು ಬೇರೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಎಂದು ಅವರು ಕೂಗಾಡಿ ಅರಚಾಡುತ್ತಿದ್ದರೂ ಸಂಬಂಧಿಸಿದವರಿಗೆ ಕಿವುಡು. ಕೆಂಪೇಗೌಡ ಚಿತ್ರದ ನಾಯಕ ನಟ ಸುದೀಪ್ ಫೋನ್ ಕರೆಗೆ ಸಿಗುತ್ತಿಲ್ಲ ಎಂಬುದು ಹರೀಶ್ ಆರೋಪ. ಕೊನೆಗೂ ಪೊಲೀಸರು ಮಧ್ಯ ಪ್ರವೇಶಿಸಿ, ಹರೀಶ್ ರಾಜ್ ಅವರನ್ನು ಮನವೊಲಿಸಿದ್ದರಿಂದ ಅವರು ಹಿಂದೆ ಸರಿದಿದ್ದಾರೆ.



ಈ ಘಟನೆ ಕನ್ನಡ ಚಿತ್ರ ನಿರ್ಮಾಪಕರು ಎದುರಿಸುತ್ತಿರುವ ಥಿಯೇಟರ್ ಸಮಸ್ಯೆಯನ್ನು ಬಟಾಬಯಲು ಮಾಡಿದೆ. ಕನ್ನಡ ಚಿತ್ರಗಳಿಗೆ ದಕ್ಕುವ ಚಿತ್ರಮಂದಿರಗಳೇ ಕಡಿಮೆ. ಸಿಕ್ಕರೂ ದೊಡ್ಡವರು ಅಡಿಯಿಟ್ಟಾಗ ಸೈಲೆಂಟಾಗಿ ದಾರಿ ಮಾಡಿಕೊಡಬೇಕು. ಮಾಡಿಕೊಟ್ಟರೆ, ಕೋಟಿ ಕೋಟಿ ಹಣ ಸುರಿದ ನಿರ್ಮಾಪಕ ನೇಣು ಹಾಕಿಕೊಳ್ಳುವುದೊಂದೇ ಬಾಕಿ. ಇದು ಕನ್ನಡ ಚಿತ್ರರಂಗದ ಸಣ್ಣವರ ಮತ್ತು ದೊಡ್ಡವರ ತಾಕಲಾಟಗಳಿಗೆ ಸಣ್ಣ ಉದಾಹರಣೆ
| Friday, March 4, 2011

ನಾರಿಯ ಸೀರೆ ಕದ್ದ ಬೆಡಗಿ ನಿಕಿತಾ ತುಕ್ರಲ್‌ಗೆ ಕಂಕಣಭಾಗ್ಯ


ದಕ್ಷಿಣ ಚಿತ್ರರಂಗದ ತಾರೆ ನಿಕಿತಾಗೆ ಈಗಾಗಲೆ ದರ್ಶನ್ ಜತೆ ಮದುವೆಯಾಗಿದೆ ಎಂಬ ಗಾಳಿಸುದ್ದಿ ಕೆಲದಿನಗಳ ಹಿಂದೆ ಗಾಂಧಿನಗರದಲ್ಲಿ ಸ್ಫೋಟಗೊಂಡಿತ್ತು. ಅಯ್ಯೋ ಇದೆಲ್ಲಾ ಯಾರೋ ಮಾಡಿದ ಕಿತಾಪತಿ ಎಂದು ದರ್ಶನ್ ಹೇಳಿ ಕೈತೊಳೆದುಕೊಂಡಿದ್ದರು. ಈಗ ಸ್ವತಃ ನಿಕಿತಾ ಅವರೇ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. 
ಇತ್ತೀಚೆಗೆ ನಡೆದ'ಗನ್' ಚಿತ್ರದ ಪೂರ್ವಭಾವಿ ಪ್ರದರ್ಶನದಲ್ಲಿ ಅದೂ ಇದೂ ಮಾತನಾಡುತ್ತಾ ತಮ್ಮ ಮದುವೆ ಯಾವಾಗ ಎಂಬ ಪತ್ರಕರ್ತರ ಪ್ರಶ್ನೆಗೆ ನಿಕಿತಾ ಪುಳಕಗೊಂಡಿದ್ದರು. ಇನ್ನು ತಡ ಮಾಡಿ ಪ್ರಯೋಜನವಿಲ್ಲ. ಈ ವರ್ಷವೇ ಮದುವೆ ಆಗಬೇಕೆಂದು ನಿರ್ಧರಿಸಿರುವುದಾಗಿ ನಿಕಿತಾ ಖಚಿತ ಉತ್ತರ ನೀಡಿದ್ದಾರೆ. ನಿಕಿತಾ ಅವರ ತಂದೆ ದಿಢೀರ್ ಅಂತ ಕಣ್ಮುಚ್ಚಿದ ಕಾರಣ ಮದುವೆ ಮುಂದೂಡಲಾಗಿತ್ತಂತೆ.
ಇನ್ನೂ ಸೂಕ್ತ ವರ ಸಿಕ್ಕಿಲ್ಲವಂತೆ. ಈ ವರ್ಷ ಹೇಗಾದರೂ ಮಾಡಿ ತನ್ನ ರಾಜಕುಮಾರನನ್ನು ಹುಡುಕುವುದಾಗಿ ನಿಕಿತಾ ತಿಳಿಸಿದ್ದಾರೆ. 
ಇನ್ನೂ ಸೂಕ್ತ ವರ ಸಿಕ್ಕಿಲ್ಲವಂತೆ. ಈ ವರ್ಷ ಹೇಗಾದರೂ ಮಾಡಿ ತನ್ನ ರಾಜಕುಮಾರನನ್ನು ಹುಡುಕುವುದಾಗಿ ನಿಕಿತಾ ತಿಳಿಸಿದ್ದಾರೆ. ಅಂದಹಾಗೆ ದರ್ಶನ್ ಜತೆ ನಿಕಿತಾ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವು ಯೋಧ, ಪ್ರಿನ್ಸ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಯೋಧ ಹೊರತುಪಡಿಸಿದರೆ ಇನ್ನೆರಡು ಚಿತ್ರಗಳು ನಿರ್ಮಾಣ ಹಂತದಲ್ಲಿವೆ
|
ಸುದೀಪ್ ಅದ್ದೂರಿ ಚಿತ್ರ ಕೆಂಪೇಗೌಡ ತೆರೆಗೆ ಬರಲು ಸಿದ್ಧ


ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೆ ಚಿತ್ರ ತೆರೆಗೆ ಅಪ್ಪಳಿಸಲಿದೆ. ಮಾರ್ಚ್10ರಂದು ರಾಜ್ಯದಾದ್ಯಂತ ಕೆಂಪೇಗೌಡ ತೆರೆಕಾಣಲಿದೆ ಎನ್ನುತ್ತವೆ ಮೂಲಗಳು. ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಶಂಕರ್ ನಿರ್ಮಿಸುತ್ತಿರುವ ಚಿತ್ರ 'ಕೆಂಪೇಗೌಡ'.
ಸುದೀಪ್ ಅವರು ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಈ ಚಿತ್ರದ ನಾಯಕಿ ರಾಗಿಣಿ. ಗಿರೀಶ್ ಕಾರ್ನಾಡ್, ಅಶೋಕ್, ಜೈಜಗದೀಶ್, ಅಶೋಕ್ ಖೇಣಿ, ತಾರಾ, ಚಿತ್ರಾಶೆಣೈ, ಸಂಗೀತ, ದತ್ತಣ್ಣ, ಶರಣ್, ಬುಲೆಟ್ ಪ್ರಕಾಶ್ ಮುಂತಾದ ಕಲಾವಿದರು 'ಕೆಂಪೇಗೌಡ' ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸೀಡಿಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಎಸ್.ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನಾಗೇಂದ್ರ ಅರಸ್ ಅವರ ಸಂಕಲವಿದೆ. ರವಿವರ್ಮ-ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಅರುಣ್ ಸಾಗರ್ ಕಲಾ ನಿರ್ದೇಶನ, ಹರ್ಷ - ಪ್ರದೀಪ್ ಅಂಥೋಣಿ ನೃಟ್ಯ ನಿರ್ದೇಶನ ಹಾಗೂ ನರಸಿಂಹ ಜಾಲಹಳ್ಳಿ ನಿರ್ಮಾಣ ನಿರ್ವಹಣೆ 'ಕೆಂಪೇಗೌಡ' ಚಿತ್ರಕ್ಕಿದೆ.



|

ನಾಗಾಭರಣ ನಿರ್ದೇಶನದಲ್ಲಿ ಗಾನಯೋಗಿ ಜೀವನ ಚರಿತ್ರೆ


ಸಂಗೀತ ಪ್ರಧಾನ ಚಿತ್ರಗಳು ಈಗಾಗಲೆ ಸಾಕಷ್ಟು ಬಂದಿವೆ. ಒಂದು ವರ್ಗದ ಪ್ರೇಕ್ಷಕರು ಆ ಚಿತ್ರಗಳನ್ನು ಆಸ್ವಾದಿಸಿದ್ದಾರೆ. ಈಗ ಮತ್ತೊಂದು ಸಂಗೀತ ಪ್ರಧಾನ ಚಿತ್ರ ಕನ್ನಡ ಬೆಳ್ಳಿತೆರೆ ಬೆಳಗಲು ಸಿದ್ಧತೆ ನಡೆಸುತ್ತಿದೆ. ಟಿ ಎಸ್ ನಾಗಾಭರಣ ನಿರ್ದೇಶನದಲ್ಲಿ 'ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ' (3 March 1914 – 17 September 2010) ಅವರ ಜೀವನ ಚರಿತ್ರೆ ಮೂಡಿಬರಲಿದೆ.
ಈ ಹಿಂದೆ ಪುಟ್ಟರಾಜ ಗವಾಯಿ ಅವರ ಗುರು ಗಾನಯೋಗಿ ಪಂಚಾಕ್ಷರಿ ಗವಾಯಿ ಜೀವನ ಚರಿತ್ರೆ ಕುರಿತ ಚಿತ್ರ ತೆರೆಗೆ ಬಂದಿತ್ತು. ಈ ಚಿತ್ರವನ್ನು ಚಿಂದೋಡಿ ಬಂಗಾರೇಶ್ ನಿರ್ದೇಶಿಸಿದ್ದರು. ಲೋಕೇಶ್ ಮತ್ತು ಗಿರೀಶ್ ಕಾರ್ನಾಡ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಹಂಸಲೇಖ ಅವರ ಸಂಗೀತ ಸಂಯೋಜನೆ, ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾಯನ ಚಿತ್ರಕ್ಕಿತ್ತು.
ಈ ಚಿತ್ರವನ್ನು ಮಾರುತಿ ಜೆಡಿಯವರ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು 'ಧರ್ಮದೇವತೆ' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಒಂಭತ್ತನೇ ಚಿತ್ರ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ. ಗವಾಯಿ ಅವರ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ.
ಈ ಚಿತ್ರದ ಮುಹೂರ್ತ ಶೀಘ್ರದಲ್ಲೇ ನಡೆಯಲಿದೆ. ಅಂದಹಾಗೆ ನಿರ್ಮಾಪಕ ಮಾರುತಿ ಅವರು ಗವಾಯಿಗಳ ಸ್ವಸ್ಥಳ ಗದುಗಿನವರು. ಹಾಗಾಗಿ ಈ ಚಿತ್ರವನ್ನು ಇವರು ತುಂಬ ಮುತುವರ್ಜಿಯಿಂದ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ನಡೆಯಲಿದೆ. ಹಿಂದೂಸ್ತಾನಿ ಸಂಗೀತದಲ್ಲಿ ಮೂಡಿಬರುತ್ತಿರುವುದು ಈ ಚಿತ್ರದ ವಿಶೇಷ. ಗವಾಯಿಗಳ ಅಪಾರ ಶಿಷ್ಯವೃಂದಕ್ಕೆ ಈ ಚಿತ್ರ ಸ್ಫೂರ್ತಿಯಾಗಲಿದೆ.
 

Copyright © 2010 ಸಿನಿಮಾ ಲೋಕ